ನೀರ್ಗುಳಿ -
ಹೊಳೆಯ ನೀರಿನ ಚಟುವಟಿಕೆಯಿಂದ ಅದರ ಪಾತ್ರದ (ನದಿಯ ಕಣಿವೆಯ) ಗಟ್ಟಿಕಲ್ಲಿನಲ್ಲಿ ಉಂಟಾದ ಹಳ್ಳ. ಪರ್ವತ ಪ್ರದೇಶಗಳಲ್ಲಿ ಅತಿವೇಗದಿಂದ ಹರಿಯುವ ನದಿ ತಾನು ಹೊತ್ತುಕೊಂಡು ಬರುವ ಮರಳು ಮತ್ತು ಕಲ್ಲಿನ ಚೂರುಗಳಿಂದ ತನ್ನ ದಡಗಳನ್ನೂ ಪಾತ್ರವನ್ನೂ ಕೊರೆಯುತ್ತ ಮುಂದುವರಿಯುತ್ತದೆ. ಅಂಥ ಪ್ರವಾಹಗಳ ತಳದಲ್ಲಿ ಪರ್ವತಝರಿಗಳ ಇಕ್ಕಟ್ಟಾದ ಕಣಿವೆಯಲ್ಲಿ ಮತ್ತು ಜಲಪಾತಗಳ ಅಡಿಯಲ್ಲಿರುವ ಗಟ್ಟಿಕಲ್ಲಿನ ತಗ್ಗುಗಳಲ್ಲಿ ತಂಗಿದ ದಪ್ಪ ಮರಳುಕಲ್ಲುಗಳು ಸಂಘರ್ಷ ಪರಿಭ್ರಮಣಗಳಿಂದ ತೋಡಿದ ಹಳ್ಳಗಳೇ ನೀರ್ಗುಳಿಗಳು. ಅತಿ ರಭಸದಿಂದ ಹರಿಯುವ ಪ್ರವಾಹದ ಸುಳಿಗೆ ಸಿಕ್ಕಿದ ಕಲ್ಲುಮರಳು ದೀರ್ಘ ಕಾಲದ ತನಕ ಒಂದೇ ಕಡೆ ಸುತ್ತುತ್ತ ಇರುವುದರಿಂದ ಆ ಹಳ್ಳವೂ ಹಿಗ್ಗುತ್ತದೆ; ಮರಳಿನ ಕಣಗಳೂ ಕಲ್ಲು ಚೂರುಗಳೂ ಸವೆದು ಗುಂಡಾಗುತ್ತವೆ;. ಸುಳಿಗಳು ಹೇರಳವಾಗಿರುವ ಜಲಪಾತಗಳ ಅಡಿಯಲ್ಲಿ ದೊಡ್ಡ ದೊಡ್ಡ ನೀರ್ಗುಳಿಗಳಿರುತ್ತವೆ. ಇವುಗಳಲ್ಲಿ ಸಿಕ್ಕುವ ನುಣುಪು ಮತ್ತು ಗುಂಡು ಕಲ್ಲುಗಳೇ ಇವನ್ನು ಅಗಲವಾಗಿ ಮಾಡಿ ಆಳವಾಗಿ ತೋಡಿದ ಹತ್ಯಾರುಗಳು. ಇವುಗಳ ಅಗಲ-ಆಳ ಕೆಲವು ಸೆಂಟಿಮೀಟರುಗಳಿಂದ ಅನೇಕ ಮೀಟರುಗಳಿಷ್ಟಿರಬಹುದು. ಮಿನಸೋಟಾದಲ್ಲಿ 6 ಮೀ ಅಗಲ 15 ಮೀ ಆಳದ ಕುಳಿಗಳಿವೆ. ಶರಾವತೀ ನದಿ ಗೇರುಸೊಪ್ಪೆ ಜಲಪಾತದ ಬಳಿ ರಭಸವಾಗಿ ಕೆಳಕ್ಕೆ ದುಮುಕುತ್ತ ತನ್ನೊಡನೆ ಕೊಂಡುಬಂದ ಕಲ್ಲು ಮರಳುಗಳ ಸಹಾಯದಿಂದ ಅಡಿಯಲ್ಲಿರುವ ಗಟ್ಟಿ ಕಲ್ಲನ್ನು ಕೊರೆಯುವ ಯಂತ್ರದಂತೆ ಕೊರೆದು, ಮೊಸರು ಕಡೆಯುವ ಮಂತಿನಂತೆ ಕಡೆದು, ಬಲು ದೊಡ್ಡ ಕುಳಿಗಳನ್ನು ತೋರಿದೆ. ತುಂಬ ದೊಡ್ಡದಾದವನ್ನು ರಕ್ಕಸನ ಕೊಪ್ಪರಿಗೆ ಎಂದು ಕರೆಯುವುದುಂಟು. (ತಿಳಿನೀರಿಗೆ ಕೊರೆಯುವ ಶಕ್ತಿ ಹೆಚ್ಚಾಗಿಲ್ಲ; ನೀರು ಒಯ್ಯುವ ಗಟ್ಟಿಯಾದ ವಸ್ತುಗಳೇ ನದೀಪಾತ್ರದಲ್ಲಿ ಕುಳಿಗಳು ಉಂಟಾಗಲು ಕಾರಣ).
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ